ಅಭ್ಯಾಸ	
	ಕಲಿಕೆಯಿಂದ ಬರುವ ಒಂದು ಬಗೆಯ ವರ್ತನೆ: ಹೊಟ್ಟಿನಿಂದ ಬಂದುದಲ್ಲ. ಮಾನವನ ಬಹುಮುಖ ವರ್ತನೆಯ ಬಹು ದೊಡ್ಡ ಭಾಗ. ಅಭ್ಯಾಸ ಸಂಯೋಜನೆಯ ಒಂದು ರೂಪ. ಅನುಭವದ ಫಲವಾಗಿ ಸಂಬಂಧಗಳನ್ನು ಕಲ್ಪಿಸಿದಾಗ ಉಂಟಾಗುತ್ತದೆ. ವಾಸ್ತವಿಕ ದೃಷ್ಟಯಲ್ಲಿ ಅದು ಎರಡು ಬಗೆಯದಾಗಿದೆ. 1. ಸಾಪೇಕ್ಷಕ ಪ್ರತಿವರ್ತನ; 2. ಪ್ರತಿಕ್ರಯಿಗಳ ಹೊಂದಾಣಿಕೆ. ಬೇರೆ ಬೇರೆ ಚಲನೆಗಳು ಒಂದುಗೂಡಿ ಹೊಸ ಸಂಯೋಜನೆಗಳಾಗುವುವು. ಅವು ಒಂದಾದ ಮೇಲೆ ಮತ್ತೊಂದು ಕ್ರಮಬದ್ಧವಾಗಿ ಬರುವುವು. ಮೊದಲನೆಯ ರೂಪದ ಅಭ್ಯಾಸಗಳು ಗೊತ್ತುಗುರಿಯಿಲ್ಲದ ಚಲನಗಳ ಮತ್ತು ಪ್ರತಿಕ್ರಿಯೆಗಳ ಸಾಮರಸ್ಯದಿಂದ ಉಂಟಾದುವು. ಎರಡನೆಯ ರೂಪದ ಅಭ್ಯಾಸಗಳು ಹಿಂದೆ ಕಲಿತ ಚಲನವಲನಗಳ ಆಧಾರದಿಂದ ಉಂಟಾದವು. ವೈಯಕ್ತಿಕ ದೃಷ್ಟಿಯಲ್ಲಿ ಅಭ್ಯಾಸಗಳು ಮಾಂಸಖಂಡದ ಚಲನವಲನಗಳಿಂದ ಉಂಟಾದ ಮನಸ್ಸಿನ ಆವೇಗಗಳು ಮತ್ತು ಚಲನಾತ್ಮಕ ಗೋಚರಗಳು; ಆದರೆ ಅನೇಕ ವೇಳೆ ನಮಗೆ ಗೊತ್ತಿಲ್ಲದೆಯೇ ಚಲನವಲನಗಳು ಅಭ್ಯಾಸಬಲದಿಂದ ಮುಂದುವರಿಯುವುವು.
	
ಕಲಿಯುವಿಕೆ ಸ್ಥಿರವಾದಾಗ ಅದು ಅಭ್ಯಾಸದ ರೂಪವನ್ನು ಹೊಂದುವುದು. ಇದರಿಂದ ಎರಡು ವಿಧವಾದ ವ್ಯಾವಹಾರಿಕ ಲಾಭಗಳುಂಟು. ಒಂದನೆಯದಾಗಿ ಒಂದು ನಿರ್ದಿಷ್ಟವಾದ ಫಲವನ್ನು ಸಾಧಿಸಲು ಬೇಕಾಗುವ ಚಲನಗಳನ್ನು ಸುಲಭವಾಗಿಸಿ ನಿರಾಯಾಸವಾಗಿಸುತ್ತದೆ: ಸಮಯ ಮತ್ತು ಶಕ್ತಿಯನ್ನು ಉಳಿಸುತ್ತದೆ. ಜೊತೆಗೆ ಚಲನೆಗಳ ಪರಿವಿಲ್ಲದೆಯೇ ಕೆಲಸ ನಡೆಸಲು ಸಹಾಯಕಾರಿಯಾಗುವುದಲ್ಲದೆ ಕೆಲಸವೂ ತನ್ನಷ್ಟಕ್ಕೇ ತಾನೇ ಮುಂದುವರಿಯುವಂತಾಗುತ್ತದೆ.

	ಉದ್ದೇಶಪೂರ್ವಕವಾಗಿ ಬೆಳೆಯುವ ಹೊಸ ಅಭ್ಯಾಸವನ್ನು ಕುರಿತು ಜೇಮ್ಸ್ ಎಂಬ ಮನಃಶಾಸ್ತ್ರಜ್ಞ ನಾಲ್ಕು ಮುಖ್ಯವಾದ ನಿಯಮಗಳನ್ನು ಹೇಳುತ್ತಾನೆ. 1. ಹೊಸದಾಗಿ ಒಂದು ಅಭ್ಯಾಸವನ್ನು ಮಾಡಿದರೆ ಅದನ್ನು ಎಷ್ಟು ಸಾಧ್ಯವೋ ಅಷ್ಟೂ ದೃಢನಿರ್ಧಾರದಿಂದ ಪ್ರಾರಂಭಿಸುವುದು. ಅಲ್ಲದೆ ಉದ್ದೇಶ ಸಾಧನೆಗೆ ಒದಗಬಲ್ಲ ಎಲ್ಲ ಸಂದರ್ಭಗಳನ್ನೂ ಬಳಸಿಕೊಳ್ಳುವುದು. 2. ಹೊಸ ಅಭ್ಯಾಸ ಭದ್ರವಾಗಿ ಬೇರೂರಿ ನಿಲ್ಲುವವರೆಗೂ ಒಂದು ಬಾಗಿಯೂ ಅದಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು; 3. ಅಭ್ಯಾಸದ ಆಚರಣೆಗಾಗಿ ಸಂದರ್ಭಗಳು ಒದಗಿದಾಗೆಲ್ಲ ಸದುಪಯೋಗಪಡಿಸಿಕೊಳ್ಳುವುದು; 4. ಅಭ್ಯಾಸವನ್ನು ತಪ್ಪದೆ ಪ್ರತಿದಿನವೂ ಆಚರಣೆಗೆ ತರುವುದು.

	ಅಭ್ಯಾಸಗಳು ರೂಢಿಗೆ ಬರುವ ರೀತಿ ಒಂದೇ ಆದರೂ ವ್ಯಾವಹಾರಿಕ ಸೌಕರ್ಯಕ್ಕಾಗಿ ಅವುಗಳನ್ನು ಹಲವಾರು ಗುಂಪುಗಳಾಗಿ ವಿಂಗಡಿಸಬಹುದು.

	1. ಕುಶಲತೆಯ ಅಭ್ಯಾಸಗಳು. ಇವುಗಳ ಪರಿಶೀಲನೆಯಿಂದ ನಮಗೆ ಅಭ್ಯಾಸದ ತತ್ತ್ವ ತಿಳಿದುಬಂದಿದೆ. ಅವು ಟೆನ್ನಿಸ್ ಅಥವಾ ಹಾಕಿಯಂಥ ಆಟಗಳು. ಯಾವುದೇ ವೃತ್ತಿ ಅಥವಾ ಕೆಲಸಗಳಲ್ಲಿನ ಕಾರ್ಯನೈಪುಣ್ಯತೆಗಳನ್ನೇ ಅಲ್ಲದೆ ಹೊಲಿಯುವ, ಹೆಣಿಗೆಯ, ಟೈಪ್ ಮಾಡುವ ಮತ್ತು ಸಂಗೀತ ವಾದ್ಯಗಳನ್ನು ನುಡಿಸುವ ಅಭ್ಯಾಸಗಳನ್ನೂ ಒಳಗೊಂಡಿವೆ.

	2. ವೈಯಕ್ತಿಕ ಅಭ್ಯಾಸಗಳು: ಎಲ್ಲ ಅಭ್ಯಾಸಗಳೂ ವೈಯಕ್ತಿಕವೇ. ಇವು ವೈಯಕ್ತಿಕ ಸಾಮಥ್ರ್ಯದ ಮುಖ್ಯ ಭಾಗ. ಆದರೂ ಕೆಲವು ಅಭ್ಯಾಸಗಳಿಗೆ ಸಾಮಾಜಿಕ ಪ್ರಾಮುಖ್ಯಕ್ಕಿಂತ ವೈಯಕ್ತಿಕ ಪ್ರಾಮುಖ್ಯವೇ ಹೆಚ್ಚು. ಉದಾಹರಣೆಗಾಗಿ ಊಟಮಾಡುವುದು, ದೇಹಬಾಧೆ ತೀರಿಸಿಕೊಳ್ಳುವುದು, ನಿದ್ದೆಮಾಡುವುದು, ಮತ್ತೆ ಎದ್ದೇಳುವುದು ಇತ್ಯಾದಿ. ಇದರಲ್ಲಿ ಲೈಂಗಿಕ ಮತ್ತು ಶುಭ್ರತೆಯ ಅಭ್ಯಾಸಗಳು ಸೇರಿವೆ.

	3. ಸಾಮಾಜಿಕ ಅಭ್ಯಾಸಗಳು: ಸಮಾಜದಲ್ಲಿ ಇತರರೊಂದಿಗೆ ವ್ಯಕ್ತಿ ನಡೆದುಕೊಳ್ಳುವ ರೀತಿನೀತಿಗಳಿಗೆ ಸಂಬಂಧಿಸಿವೆ. ಅವುಗಳಲ್ಲಿ ಸಾಮಾಜಿಕ ಶಿಷ್ಟತೆ, ನಡೆನುಡಿಗಳಲ್ಲದೆ ವ್ಯಾಪಾರ ವ್ಯವಹಾರಗಳಲ್ಲಿ ವ್ಯಕ್ತಿಯ ನಡತೆಯೂ ಸೇರುತ್ತದಲ್ಲದೆ ಒಟ್ಟಾರೆ ಅವನ ನೈತಿಕ ನಡೆವಳಿಕೆಗಳೆಲ್ಲ ಸೇರಿವೆ. ನೈತಿಕಾಭ್ಯಾಸಗಳಲ್ಲಿ ವಿಧೇಯತೆ ಅಥವಾ ಅವಿಧೇಯತೆ, ಸಮಯನಿಷ್ಠೆ ಅಥವಾ ಆಲಸ್ಯ, ಉದಾರತೆ ಅಥವಾ ಜಿಪುಣತನ, ಜಾಗರೂಕತೆ ಅಥವಾ ಉದಾಸೀನತೆ ಮುಂತಾದ ಅಭ್ಯಾಸಗಳೂ ಸೇರಿವೆ.

	4. ರಾಗೋದ್ವೇಗಗಳಿಗೆ ಸಂಬಂಧಿಸಿದ ಅಭ್ಯಾಸಗಳು: ಇವು ನಮ್ಮ ಭಾವೋದ್ರೇಕಗಳನ್ನು ಹತೋಟಿಯಲ್ಲಿಡುವ ಕಲಿಕೆಯ ಮೇಲೆ ನಿಂತಿದೆ. ಆದ್ದರಿಂದ ವ್ಯಕ್ತಿಯ ಪರಿಸರ ಇಲ್ಲಿ ಬಹುಮುಖ್ಯವಾಗುತ್ತದೆ. ತಂದೆತಾಯಿಗಳು, ಗುರುಹಿರಿಯರು ನಮ್ಮ ಭಾವಾವೇಶಗಳನ್ನು ಹತೋಟಿಯಲ್ಲಿಡಲು ಕಲಿಸಿಕೊಡುವರು. ಮನಸ್ಸಿನ ದೃಢತೆ ಸಹ ಆಜೀವಪರ್ಯಂತ ಶ್ರದ್ಧೆಯಿಂದ ಬೆಳೆಸಿಕೊಳ್ಳಬೇಕಾದ ಒಂದು ಅಭ್ಯಾಸ. ಈ ಅಭ್ಯಾಸಗಳು ರಾಗೋದ್ವೇಗಗಳನ್ನು ಅರ್ಥಮಾಡಿಕೊಳ್ಳುವ ಅರ್ಹತೆ, ಪರಿಸರದ ಪ್ರಭಾವತೀವ್ರತೆ, ಪರಾಮರ್ಶನ ಮತ್ತು ಶಿಕ್ಷಣದಿಂದ ಉಂಟಾಗುತ್ತವೆ.

	ಚೆನ್ನಾದ ಕಲಿಕೆಯಿಂದ ಬರುವ ನಡೆವಳಿಕೆಯೇ ಅಭ್ಯಾಸವಲ್ಲದೆ ಮತ್ತೇನೂ ಅಲ್ಲ. ಬಳಕೆತಪ್ಪಿದಲ್ಲಿ ಅದನ್ನೂ ಇತರ ಅನೇಕ ವಿಷಯಗಳಂತೆ ಮರೆಯಬಲ್ಲ. ಆದರೆ ಕಲಿತ ಅಭ್ಯಾಸವನ್ನು ಬಿಡುವುದು ಕಷ್ಟ. ರೂಪುಗೊಂಡ ಮೇಲೆ ಅದು ಶಾಶ್ವತವಾಗಿ ನಿಲ್ಲುತ್ತದೆ. ಅದನ್ನು ಮರೆಯುವುದೋ ಅಥವಾ ಬಿಟ್ಟುಬಿಡುವುದೋ ಬಹಳ ಕಷ್ಟ. ಒಳ್ಳೆಯ ಅಭ್ಯಾಸಗಳಿಗಿಂತ ಕೆಟ್ಟವಕ್ಕೆ ಈ ಸೂತ್ರ ಪೂರ್ಣ ಅನ್ವಯಿಸುತ್ತದೆ. ಒಳ್ಳೆಯ ಅಭ್ಯಾಸವನ್ನು ರೂಢಿಗೆ ತರುವುದು ಕಷ್ಟ. ತಂದಮೇಲೂ ಅದು ಶಾಶ್ವತವಾಗಿ ನಿಲ್ಲುತ್ತದೆಂದು ಹೇಳಲಾಗದು. ಸುಖ ಮತ್ತು ಸೋಮಾರಿತನದ ಆಶೆಯಿಂದಾಗಿ ಕಲಿತ ಒಳ್ಳೆಯ ಅಭ್ಯಾಸ ಕೈನುಣುಚಿ ಹೋಗಬಹುದು. ಆದರೆ ದುಷ್ಟ ಅಭ್ಯಾಸಗಳು ಬೇಗ ಸುಲಭವಾಗಿ ಬಂದು ಕೊನೆಯನಕ ಅನಾಯಾಸವಾಗಿ ನಿಲ್ಲುತ್ತವೆ. ಧೂಮಪಾನ ಮತ್ತು ಮದ್ಯಸೇವನೆ ಮುಂತಾದ ಕೆಟ್ಟ ಅಭ್ಯಾಸಗಳನ್ನು ಮುರಿಯಬಲ್ಲ ಯಾವುದೇ ಒಂದು ಸಫಲವಿಧಾನ ಹುಡುಕುವುದು ಬಹು ಕಷ್ಟದ ಕೆಲಸ. ಹಾಗೆಮಾಡಲು ಹಿಂದಿನ ಅಭ್ಯಾಸದ ಪ್ರತಿಕ್ರಿಯೆಗಳನ್ನು ತಡೆಯುವ ಹೊಸ ಪ್ರತಿಕ್ರಿಯೆಗಳ ಬೆಳೆವಣಿಗೆ ಆವಶ್ಯಕ. ಹಳೆಯ ಅಭ್ಯಾಸಗಳನ್ನು ವಿರೋಧಿಸುವ ಬಗ್ಗೆ, ಗತಿ ಎಂಬಾತ ಬಿಡಿಯಾಗಿಯೋ ಅಥವಾ ಬೇರೆಯಾಗಿಯೋ ಬಳಸುವಂಥ ನಾಲ್ಕು ವಿಧಾನಗಳನ್ನು ಸೂಚಿಸಿದ್ದಾನೆ: ಅವಕ್ಕೆ ಹೊಂದದ ನಡೆವಳಿಕೆಗಳನ್ನು ಆಚರಣೆಗೆ ತರುವುದು, ಅವುಗಳ ಅತಿಬಳಕೆಯಿಂದ ಅಸಹ್ಯ ಹುಟ್ಟುವಂತೆ ನಡೆಯುವುದು, ಬಳಕೆಯನ್ನು ಸಾಧ್ಯವಾದಷ್ಟು ಮಿತಿಗೊಳಿಸುವುದು ಮತ್ತು ಪರಿಸರವನ್ನು ಪೂರ್ತ ಬದಲಿಸುವುದು. ಇವುಗಳಲ್ಲಿ ಯಾವುದು ಅತ್ಯುತ್ತಮ ವಿಧಾನವೆಂಬುದು ತೊಡೆದು ಹಾಕಬೇಕಾಗಿರುವ ಅಭ್ಯಾಸದ ಸ್ವಭಾವ, ಪ್ರಾಬಲ್ಯ, ಕಾಲಾವಧಿಗಳನ್ನು ಅವಲಂಬಿಸಿದೆ.

(ಟಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ